Monday, 3 December 2012

ಹೂ ಮಳೆ.... :) :)



Creative Commons License
Poems by Bharath S Kallur is licensed under a Creative Commons Attribution-NonCommercial-NoDerivs 3.0 Unported License.
Based on a work at preetiyinda-bsk.blogspot.in.


ಪುಟದಲ್ಲಿ ನನ್ನ ಕವನಗಳ ಮುಂದುವರಿದ ಭಾಗವನ್ನು ನೀವು ಕಾಣುವಿರಿ. ಓದಿ ಖುಷಿ  ಪಡುವಿರೆಂದು ಭಾವಿಸುವೆ. :) :)

************************************************************************ 

ನಿನ್ನ ಕಾಯೋ ಪ್ರತಿ ಕ್ಷಣದಲು - ಅದೇನೊ ಮೋಜು ಅಡಗಿದೆ,
ಭುವಿಯ ತಲುಪೊ ರವಿಯ ಮೊದಲ ಕಿರಣದ ಸುಖ ನೀಡಿದೆ....

ಮನಸ ಮೊದಲು ಕೊಡು ಚೆಲುವೆ,
ನಿನ್ನ ಮಾತಿಗೆ ನಾ ಕಾಯುವೆ,
ಕವಿತೆಗಷ್ಟೇ ಸ್ಪೂರ್ತಿಯಾಗೆ,
ಸಂಕಲನ ನಿನಗೆ ಬರೆಯುವೆ....

ಸನಿಹವೇನು ಬೇಡ ಹುಡುಗಿ,
ನನ್ನ ಕನಸಲೆ ನಿನ್ನ ಅಪ್ಪಿರುವೆ,
ಸಂದೇಶವೇನು ಬೇಡ ಗೆಳತಿ,
ನಿನ್ನ ಕಣ್ಣ್ ಸನ್ನೆ ಸಾಕಾಗಿದೆ....


 
************************************************************************

ಕನಸುಗಳ ಕದ್ದ ಚೆಲುವೆ - ನಿನಗಾಗಿ ಕಾಯುತಿರುವೆನೆ,
ಇಂದು ಪ್ರೇಮ ದಿನವಂತೆ - ನೀ ಬರಬಾರದೆ., ಕಣ್ಣೆದುರಿಗೆ....?

ಕೆಂಪು ಸಂಜೆ ಬೆಳಕಿನಲ್ಲಿ,
ನಿನ್ನ ಕಂಡೆ - ಪ್ರೀತಿ ಹುಟ್ಟಿತು,
ಹೇಳಿಬಿಡಲು ಪ್ರೀತಿ ನಿನಗೆ,
ನೂರು ದಿನವು ಸಾಲದು....

ಪ್ರೀತಿ ಕುರುಡು - ಮೂಕ ನಾನು,
ಮನಸ ಮಾತ ಗ್ರಹಿಸಿಕೊ,
ಎದೆಯ ಕದವ ತೆರೆದಿರುವೆನು,
ನನ್ನಪ್ಪಿ ಒಳಗೆ ಸೇರಿಕೊ....

ವೇಳೆ ಇರದೀ ಪ್ರೀತಿಗೆ,
ದಿನವೊಂದೆ ಹೇಗೆ ಮೀಸಲು?
ಕಣ್ಣು ಮುಚ್ಚೊ ಕಾಲಕೂ,
ಪ್ರೀತಿಸುವೆನು ನಿನ್ನ ನಾನು....

 
************************************************************************


(ಚೆಂದುಟಿಯ ಪಕ್ಕದಲಿ - ಡ್ರಾಮಾ : ಹಾಡಿನ ಧಾಟಿಯಲಿ ಈ ಹಾಡಿದೆ)

ಹೂವುಗಳ ತೋಟದಲಿ - ಕೆಂಗುಲಾಬಿಯ ತಂದು,
ಮೃದುವಾದ ರೆಪ್ಪೆಗಳ - ಮುದ್ದಿಸ್ಲ??
ಮುಂಗುರುಳ ಸುತ್ತುಗಳ - ನನ್ನ ಬೆರಳಿಗೆ ತೊಟ್ಟು,
ಲಗ್ನಕ್ಕೆ ನಿಶ್ಚಿತವ ಬರೆಸಿಡ್ಲ..??
ನಿನ್ನ ಹೆಜ್ಜೆಗೆ - ಹೆಜ್ಜೆ ಜೋಡಿಸ್ಲ??
ಕೈ ರೇಖೆ ನಿನ್ನ ಕೈಗೆ ಕೂಡಿಸ್ಲ??
ನಿನ್ನ ಪ್ರೀತಿಸೊ ವಿಷಯ ಹೇಳ್ಬಿಡ್ಲ....??

ನೀ ಕಾಣೊ ಕನಸಿನಲಿ - ಕಾತುರದಿ ನಾ ಬರುವೆ,
ಮುತ್ತೊಂದ ಒತ್ತಿ ಬಿಡು ಈ ಕೆನ್ನೆ ಮೇಲೆ....
ನೀ ಹಾಡೊ ಸ್ವರಗಳ - ಒಂದೊಂದೆ ಎಣಿಸಿರುವೆ,
ಕೂಡಿಸಿ, ಕವಿತೆಯನು ನಾ ಕಟ್ಟಿ ಬಿಡಲೇ....?
ಕಣ್ಣ್ ಸನ್ನೆ ಮಾತನ್ನ ಸೆರೆ ಇಡ್ಲ??
ಬೆರಳುಗಳ ಆಟಕ್ಕೆ ನಾ ಸೇರ್ಲ??
ನಿನ್ನ ಪ್ರೀತಿಸೋ ವಿಷಯ ಹೇಳ್ಬಿಡ್ಲ....??

ನಿನ್ನ ಮನಸ ಕದವನ್ನು - ತಟ್ಟಿ ನಾ ಕಾದಿರುವೆ,
ಕಾಯಿಸದೆ ಇಣುಕಿಬಿಡು - ಮೊಗವಾದ್ರು ಕಾಣ್ಲಿ....
ಹೇಳಿಬಿಡು ನಿನ್ನ ಹೆಸರ - ಬರೆದಿಡುವೆ ಈ ಹೃದಯ,
ತೊಡಿಸಿಬಿಡು ನೀ ಅದಕೆ ಪ್ರೀತಿಯ ಬೇಲಿ....
ತಂಗಾಳಿ ಸುಳಿಯಲು ಹೇಳಿರ್ಲಾ??
ಸಂಜೆಯ ಭೇಟಿಯನು ಹೆಚ್ಚಿಸ್ಲ??
ನಿನ್ನ ಪ್ರೀತಿಸೋ ವಿಷಯ ಹೇಳ್ಬಿಡ್ಲ....?? 


************************************************************************

ಮನಸಿನಲಿ ನೀ ತಂದ ಭಾವನೆಯ, ಸಾಲಾಗಿ,
ಬರೆದಿರುವೆ ತೋಚಿದ್ದು - ಯೋಚಿಸದೆ ಅತಿಯಾಗಿ....

ನಿದಿರೆ ಬರದೆ ಕನಸು ಕಾಣುವುದು,
ಕನಸ ತುಂಬಾ ನಿನ್ನ ಹೆಸರನು,
ಹೃದಯದ ಹಾಳೆ ಮೇಲೆ - ಸುಮ್ಮನೆ ನಾ ಗೀಚುತಿರುವೆನು....

ನಿನ್ನ ಕೋಪದಾ - ಚುರುಕನು,
ಹೆಚ್ಚಿಸಲೇ ಸ್ವಲ್ಪ ನಾನು?
ಛೇಡಿಸುತ ನೀಲಿಗಣ್ಣನು - ಕದ್ದು ನನ್ನೇ ನೋಡುತಿವೆಯೆಂದು....

ಹೃದಯಕ್ಕೆ ಹೂ ಗುಚ್ಛ ಇಟ್ಟು,
ಕೊಡುವೆ ನಾ, ಕವನ ಬರೆದು,
ಒಪ್ಪುವೆಯ ನೀ ಇಂದು - 'ಇವನೆ ನನ್ ಹುಡುಗನೆಂದು'....?
 


************************************************************************

ಸೂರ್ಯನಿಗು ಕನಸ ಕಾಣಿಸಿದವಳು ನೀನೇನೆ,
ಚಂದ್ರನಿಗು ತಲೆ ಕೆಡಿಸಿ ಬಂದವಳು ನೀ ತಾನೆ?

ನಿನ ಸೀರೆ ಸೆರಗಿನಡಿ ನನ್ ಹೃದಯ ಬಚ್ಚಿಡುವೆ,
ಹುಡುಕಿಟ್ಟುಕೋ ಅದನು - ನನಗೆ ಹಿಂದಿರುಗಿಸಬೇಡ..
ರೆಪ್ಪೆಗಳ ಅಲುಗಿಸದೆ - ಕಣ್ ಕನ್ನಡಿ ಮಾಡಿರುವೆ,
ಹಣೆ ಬೊಟ್ಟು ಸರುಗಿಸಿಕೋ - ನೋಡುತಲಿ ನಿನ್ನ ಬಿಂಬ....

ಈ ಮನದ ಉಂಗುರದಿ - ನಿನ್ನ ಹೆಸರ ಹಚ್ಚೆ ಇದೆ,
ತೊಟ್ಟುಕೋ ನೀ ಅದನು - ಮರು ಮಾತೊಂದು ಬೇಡ,
ನಿನಗೆಂದೆ ಹೂಗಳರಮನೆಯ - ಕಟ್ಟಿರುವೆ,
ಇದ್ದು ಬಿಡು ನನ್ನ ಜೊತೆ - ನೀನೆ, ಉಸಿರಾಗಿರುವಾಗ....

*************************************************************************  



ನೀ ಜೊತೆಯಲಿರಲು - ಪ್ರತಿ ಕ್ಷಣವೂ ಕಾವ್ಯಮಯವೆ,
ಮೊದಲ ನೋಟದಲ್ಲೇ ನಾ ಕವಿಯಾಗಿ ಹೋದೆನೆ....

ಮರೆತಿದ್ದ ಪ್ರೇಮಗೀತೆ ನೆನೆದೆ,
ನಿನಗೆಂದೇ - ಹಾಡಲೆನಿಸಿದೆ,
ಅವಿತಿರುವೆ ಎಲ್ಲಿ - ರತ್ನ ಗಣಿಯೆ?
ಕಾಣಲಿಷ್ಟು - ತಡ ಮಾಡುವುದೇ?

ಆ ಕಣ್ರೆಪ್ಪೆ ಸಂದೇಶಕೆ,
ನನ್ ಹೃದಯ ಕಾದು ಕುಳಿತಿದೆ,
ಆ ತುಟಿಯ ಮೊದಲ ಮುತ್ತಿಲ್ಲದೆ,
ಈ ಕೆನ್ನೆ ಇನ್ನು ಖಾಲಿ ಇದೆ.... 


*************************************************************************


ನಿನಗೆಂದೆ ಮತ್ತೊಮ್ಮೆ ಬರೆದಿರುವೆ ಈ ಸಾಲು,
ಪ್ರೇಮ ಪತ್ರವ ಬರೆದೆ - ಅದರಲಿದೆ ನಿನ್ನ ಹೆಸರು....

ಕನಸುಗಳೆ ಆಸರೆಯು ನೀ ಎದುರಾಗೊವರೆಗೆ,
ಕಾಯುತಿದೆ ಕಣ್ಣುಗಳು ನೀ ಬರುವ ದಾರಿಯನೆ,
ಹೂವನ್ನೇ ಚುಂಬಿಸುತ - ನೆನೆದಿರುವೆ ನಿನ್ನನ್ನೇ,
ಇರಬಹುದೇ ಆ ಕೆನ್ನೆ - ಹೂಗಿಂತ ಮ್ರುದುವಾಗೆ....

ತಂಪು ನೆರಳಲಿ ನಿಂತು ನಿನ್ನ ಹೆಸರೇ ನೆನೆದಿರುವೆ,
ಈ ಹೃದಯ ಬಡಿಯುತಿದೆ ಹೆಸರಲಿರೋ ತಾಳಕೆ,
ಎಲ್ಲ ಸರಿ, ನೀನಿರದ ನೋವೊಂದು ಜೊತೆಯಲಿದೆ,
ನೋವ ದೂಡಿ - ನನ್ನ ಜೋಡಿ ನೀ ಸೇರಬಾರದೆ....??


**************************************************************************

ಮರೆತ ನೆನಪುಗಳ - ಮೆಲುಕಿಸಿದ ಮಳೆಯಲ್ಲಿ,
ನೆನೆಯುತ್ತ ಬರೆದ ಸಾಲುಗಳಿದು - ನಿನ್ನ ನೆನಪಲಿ....

ಹೂಗಳು ನಿನ್ನ ಕಾದು - ಬಾಡುತಲಿರುವಾಗ,
ಮುಗುಳ್ನಕ್ಕು- ಅವುಗಳ ಮತ್ತೆ ನಗಿಸಬಾರದೆ?
ನೀನಿದ್ದ ಕನಸುಗಳು ಖಾಲಿಯಾಗಿರುವಾಗ,
ನನಸಲ್ಲೇ ಎದುರು - ಬಂದು ನಿಲ್ಲಬಾರದೆ?

ಪ್ರೀತಿಯ ಸೋನೆ ಮೆಲ್ಲ ಜಿನುಗುತಿರುವಾಗ,
ಕೈ ಬೊಗಸೆಯಲಿ ಹನಿಗಳ ಕೂಡಿಸೋಣವೆ?
ನಿನ್ನ ಚಲುವಿಗೆ - ಕಣ್ಣು ಸೋಲುತಲಿರುವಾಗ,
ಎದೆಯ ಪ್ರೀತಿಯಲಿ - ನಿನ್ನ ಗೆಲ್ಲುವಾಸೆಯಾಗುತಿದೆ.... 

************************************************************************ 

ಯಾವ ಪ್ರೇಮಗೀತೆಯ ನಿನಗೆ ಮುಡಿಪಿಡಲೇ...? ಬರೆವ ಪದಗಳಲೆಲ್ಲಾ ನೀನೆ ತುಂಬಿರುವಾಗ..
ಯಾವ ಹೂವ ತಂದು ನಿನ್ನ ಜೇನುತುಟಿ ಸವರಲೇ...? ಹೂಗಳೆಲ್ಲ - ನಿನ್ನ ತುಟಿ ಜೇನೆ ತುಂಬಿಕೊಂಡಿರುವಾಗ....

ಯಾವ ಸಿಹಿ ನೆನಪ - ಕಣ್ ತುಂಬಿಕೊಳಲೇ...? ಇರುವ ನೆನಪುಗಳೆಲ್ಲ ನಿನದೆ ಆಗಿರುವಾಗ..
ಯಾವ ಶಿಲ್ಪಕ್ಕೆ ನಿನ್ನ ಹೋಲಿಸಲೇ...? ಕಡೆದ ಶಿಲ್ಪಗಳಿಗೆಲ್ಲ - ನೀನೆ ಸ್ಫೂರ್ತಿಯಾಗಿರುವಾಗ....

ಯಾವ ಮುತ್ತಿಟ್ಟು ನಿನ್ನ ಅಲಂಕರಿಸಲೇ...? ಮುತ್ತಿನ ಹಾರವೇ ನಿನ್ನ ಕೊರಳ ಶೋಭಿಸುವಾಗ..
ಹೃದಯದಲಿ ಅಪ್ಪಿ ನಾ ನಿನ್ನ ಪ್ರೀತಿಸುವೆ.. ನಿನಗೆಂದೇ ಈ ಹೃದಯ ಸದಾ ಮಿಡಿಯುತಿರುವಾಗ....
  

************************************************************************

ಒಮ್ಮೆ ಕಂಡ ಮಾಯೆಯೇ - ಮತ್ತೆ ನೀ ಎದುರು ಬಾರದೆ,
ಏಕೆ ನನ್ನ ಕಾಡಿರುವೆ - ಖಾಲಿ ನೆನಪುಗಳಿಂದಲೇ....

ಘಲ್ಲೆಂದ ನಿನ್ನ ಕೈ ಬಳೆಗೆ - ಹೃದಯ ಬಡಿತ ಹೆಚ್ಚಿತೆ,

ನಿನ್ನ ಕಂಡ ಕ್ಷಣದಲೇ - ಈ ಮನವ ನಿನಗೆ ಬರೆದೆನೆ,
ಹೆಸರು ಕೇಳೋ ಮುನ್ನವೆ - ಆ ನಗಗೆ ಮೂಕನಾದೆನೆ,
ಹೇಗೆ ನಿನ್ನ ಹುಡುಕಲಿ - ಈ ಸಂತೆಯಲಿ ಹೆಸರಿಲ್ಲದೆ....??


ಮಳೆಯ ಪ್ರತಿ ಹನಿಯದು - ನನ್ನ ಸೋಕಿದಾಗಲೇ,
ನಿನ್ನ ಮೊದಲು ಸ್ಪರ್ಶಿಸಿದ - ನೆನಪು ಕಾಡಿ ಬಂದಿದೆ,
ಕನಸು ಕಾಣೋ ಕಣ್ಣಿಗೆ - ನೀನೆ ಎದುರು ಕಂಡರೆ,
ಕನಸ ಮರೆತು ಮೆಲ್ಲನೆ - ನಿನ್ನೆ ಕಾಣುವುದಲ್ಲವೇ....??
************************************************************************

ಹೃದಯ ಹಂಬಲಿಸುತಿದೆ - ನೀ ಮತ್ತೆ ಎದುರು ಬಾರೆ,
ಹೂವ ಬಿಟ್ಟು ಪರಿಮಳ - ಬೇರೆ ಎಂದು ಇರುವುದೇ...?

ಒಲವ ಧಾರೆ ನಿನಗೇನೆಂದು ಹೆಸರಿಡಲೇ?

ನಾ ಬರೆವ ಪ್ರತಿ ಶಬ್ಧದಲು ನಿನದೆ ಹೆಸರಿರಲು,
ಹೆಸರ ಪೂರ್ತಿ ಹೇಳೋ ಮೊದಲೇನೆ,
ನಿನ್ನಂದಕೆ ಈ ಮನ ಸೋತು ಹೆಸರ ಮರೆಯುತಿರಲು....

 
ನೆನಪುಗಳದು ಕೂಡಿ ಮುಂಗಾರು ಹನಿಯೊಂದಿಗೆ,
ಕಾಣುತಿರುವೆ ನಿನ್ನ - ಪ್ರತಿ ಹನಿ ತಂದಿರುವ ನೆನಪಲು,
ನೆನಪಿನ ಹೂ ಮಳೆ - ಕನಸುಗಳ ಹುಟ್ಟುಹಾಕಿರೆ,
ಹುಣ್ಣಿಮೆ ಬೆಳದಿಂಗಳಲಿರುವೆ, ನಾ ನಿನ್ನ ತಬ್ಬಿ - ಪ್ರತಿ ಕನಸಲು....
 ************************************************************************

(ಅಮೃತವರ್ಷಿಣಿ ಚಿತ್ರದ "ಭಲೇ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು" ಹಾಡಿನ ರಾಗಕ್ಕೆ ಪದ ಕಟ್ಟುವ ಪ್ರಯತ್ನ )

ಎಲ್ಲ ಕವಿಗಳಿಗೂ - ನಿನ್ನ ಹೊಗಳುವ ಬಯಕೆಯೇ,
ನನ್ನ ಕವಿತೆಗಳರಸಿ.. ಪ್ರತಿ ಕಾವ್ಯವು ನಿನಗೇನೆ....

ಸವಿ ಸವಿ ಪ್ರೇಮದ ಸಿಂಚನ ತಂದೆ ನೀನು,

ಪರಿ ಪರಿ ಬಿಡಿಸಿ ನಾ ಹೊಗಳಲೇ ಅಂದವನು?
ನಿನ್ನ ನೀಲಿಗಣ್ಣದು - ಆಗಸಕೆ ಸ್ಪೂರ್ತಿಯು,
ಆ ಕಂಗಳ ಕಾಪಾಡೋ ರೆಪ್ಪೆಯ ಆಣೆಗು - ನಿಂಗೆ ನಾನೆ ಕಾವಲು,
ಮೊಲ್ಲೆ ಹೂವಿಗೆ ಪರಿಮಳ ಜೀವವಾದಂತೆ - ನೀ ತಾನೇ ನನ್ನುಸಿರು?

ಚೆಲುವೆ ನವಿಲು ತಾನು - ನಿನ್ನ ನಡೆಯ ಕಂಡೆ, ನಾಟ್ಯಕೆಂದೇ ನಿಂತಿತು,

ಬಣ್ಣದಾ.. ಗರಿ ಬಿಚ್ಚಿ ಕುಣಿಯಿತು.. ನಿನ್ನ ಹೆಜ್ಜೆ ತಾಳಕೂ..
ಕಸ್ತೂರಿ ಕೋಗಿಲೆ - ನಿನ್ನ ಕಂಠ ಕೇಳಿ, ಸಂಗೀತ ತಾ ಹಾಡಲು,
ಕು ಕು ಕೂ.. ಹೊಸ ಸ್ವರ ಹಾಡಿತು.. ನಿನ್ನೆ ಗುರು ಎಂದಿತು..
ಆ ಸಂಜೆ ನಿನಗಾಗಿ ಕಾಯುತಿದೆ, ನಿನ್ನ ಮುತ್ತಿಂದ ಅದಕಿನ್ನು ಕೆಂಪೇರಿದೆ,
ನೀ ಹೋಗೋ ದಾರಿಯಲೆಲ್ಲಾಕಡೆ, ಮೆಲ್ಲ ಹೂಗಳು ಹಾಸಿಗೆ ಹಾಸಿದವೆ,
ಎಲ್ಲ ಸೃಷ್ಟಿಯ ಬೆರಗಿಸೋ ಅಂದವು ನಿಂದೇನಾ..?? ಮಾತೊಂದು ಇಲ್ಲದ.. ಸಿಹಿ ಮೌನದ ಭಾವನೆ ನನ್ನಲ್ಲಿ ನಿನ್ನಿಂದಲೆ....

|| ಸವಿ ಸವಿ ಪ್ರೇಮದ.. ||


ಅತ್ತ ಸಂಪಿಗೆಯು ಇತ್ತ ಜಾಜಿಯೊಂದು, ಮಾತಿಗೆಂದೆ ನಿಂತವು,

ಆಸೆಯಾ.. ಹೇಳಿಕೊಳ್ಳುತ್ತಿದ್ದವು.. ನಿನ್ನ ಮುಡಿ ಸೇರಲು..
ಚಿಟ - ಪಟ ಮಳೆ ಹನಿ, ನಿನ್ನನ್ನು ಸೋಕಲು, ಸಾಲಾಗಿ ತಾ ಬಂದವು,
ಸೋಕಿದಾ.. ಖುಷಿ ಭಾವನೆಯಲೇ.. ತನ್ನೆ ಮರೆತು ಹೋದವು..
ನಾ ಬರೆವ ಪ್ರತಿಯೊಂದು ಅಕ್ಷರವೆ, ನೀ - ಕೈ ಹಿಡಿದು ತಿದ್ದಿದ್ದ ಬರಹ ತಾನೇ?
ನನ್ನೇ ನಾ ಮರೆತರು ನಿನ್ನಂದಕೆ, ನಿನ್ನ ಹೆಸರೊಂದು ಮರೆಯೇನೆ ಈ ಜನ್ಮದೆ,
ನನ್ನ ಹೃದಯದಿ ತಂಗಾಳಿ ಆದವಳು ನೀನೇನಾ..?? ಕೊನೆಯೇ ಇಲ್ಲದ.. ನನ್ನ ಪ್ರೀತಿಗೆ, ಒಡತಿ ನೀನೇನೆ.. ನೀನೇನೆ....

|| ಸವಿ ಸವಿ ಪ್ರೇಮದ.. || .... 


************************************************************************
ಹೃದಯ ಬಡಿತದ ತಾಳಕೆ - ನಿನ್ನುಸಿರ ರಾಗ ಸೇರಿಸೆ,
ಜೋಡಿಯಾಗಿ ನಾವಿಂದು - ಹಾಡೋಣ ಪ್ರೇಮ ಕವಿತೆ....

ಚಂದ್ರ ತನ್ನ ಕನಸಲು - ನಿನ್ನ ಕಂಡು ನಾಚಿಕೊಂಡನೆ,

ಸೂರ್ಯ ಬೆಳಕ ನೀಡಲು - ಕಾದಿರುವ ನಿನ್ನ ಆಣತಿಗೆ,
ಚಿಗುರೊ ಹಸಿರು ಎಲೆಯು - ನಿನ್ನ ಮುತ್ತಿನಲ್ಲಿ ಮಿರುಗಿದೆ,
ನಿನ್ನ ಕಣ್ಣ ಹೊನ್ನ ಕಾಂತಿ - ಸೂರ್ಯಕಾಂತಿ ಅರಳಿಸಿದೆ....

ಕಣ್ರೆಪ್ಪೆಯ ಚಿಟ್ಟೆ ಹಿಡಿದು - ಮುತ್ತೊಂದ ನಾ ನೀಡಲೇ?

ಬಿಳಿ ಹಿಮದ ಕೆನ್ನೆ ಸವರೋ - ಕಾತುರವು ನನ್ನ ಬೆರಳಿಗೆ,
ಮಳೆ ಹನಿಯುತಿರೊ ಈ ತಂಪಲಿ - ನಿನ್ನ ತಬ್ಬಿ ಬೆಚ್ಚಗೆ,
ಬಿಟ್ಟು ಬಿಡದೆ ನಿನ್ನೊಂದಿಗೆ - ನಾ ಮಾತನಾಡಲೆನಿಸಿದೆ....


************************************************************************