Friday, 21 September 2012

ಮೊದಲ ಹನಿ.... :) :)

Creative Commons License
Poems by Bharath S Kallur is licensed under a Creative Commons Attribution-NonCommercial-NoDerivs 3.0 Unported License.
Based on a work at preetiyinda-bsk.blogspot.in.

           ತಾಯಿ ಶಾರದೆ ಮತ್ತು ಪ್ರೇಮಕವಿಗಳ ಆಶೀರ್ವಚನದಿಂದ, ಪದ ಕಟ್ಟುವೆ ಕಲೆಗೆ ಕಾಲಿಟ್ಟಿರುವ ಈ ಹೊಸ ಚಿಗುರನ್ನು ಪೋಷಿಸುವಿರೆಂದು ಭಾವಿಸುತಾ.., ನಾ ಬರೆದ ಕೆಲವು ಸಾಲುಗಳನ್ನು ನಿಮ್ಮ ಮುಂದಿಡಲು ಇಷ್ಟ ಪಡುತ್ತಿದ್ದೇನೆ. ನಿಮ್ಮ ಒಲವೆ ನನಗೆ ಸ್ಫೂರ್ತಿ.
ಈ "blog " ಅಲ್ಲಿ ಓದುವ ಕವನಗಳನ್ನು (ಹೆಚ್ಚಾಗಿ ಪ್ರೇಮಕವನಗಳು), ನನ್ನ ಜೀವನದ ಕೆಲವು ಅನುಭವುಗಳು ಹಾಗು ಸ್ಫೂರ್ತಿಗೆ "dedicate " ಮಾಡಲು ನಾನು ಬಯಸುತ್ತೇನೆ. 
ಅಲ್ಲೊಮ್ಮೆ ಇಲ್ಲೊಮ್ಮೆ ಆಂಗ್ಲ ಶಬ್ದ ಆಗಾಗ್ಗೆ ಬಳಸುವುದಕ್ಕೆ "ಕಟ್ಟಾ" ಕನ್ನಡಾಭಿಮಾನಿಗಳಿಂದ ಕ್ಷಮೆ ಇರಲಿ. ನಮ್ಮ "ಕನ್ನಡ" ಹೃದಯದ ಭಾಷೆ , ಎಂದು ನಾ ನಂಬಿರುತ್ತೇನೆ....:-) :-)
                                                                   - ಇಂತಿ ನಿಮ್ಮ ಪ್ರೀತಿಯ 
                                                                        ಬಿ . ಎಸ್. ಕೆ....


************************************************************************

ಹಾಗೆ ನಡೆದು ಹೋದಾಗ - ನಿನ್ನ ಒಲವು ನೆನಪಾಗಿದೆ,
ಒಮ್ಮೆ ನಿನ್ನ ತಬ್ಬಿ ನಾನು - ಅಳಲು ಮನಸಾಗಿದೆ....

ಸಂಜೆ ತಂಪು ಗಾಳಿಯೂ - ನಿನ್ನ ಸುತ್ತ ಸುಳಿದಿದೆ,
ಹೂ, ಮೆದು ಹೊಂಬಿಸಿಲಿಗೆ - ನಿನಗೆಂದೆ ಅರಳಿದೆ,
ನೀರ ತಿಳಿಯ ಅಲೆಗಳು - ನಿನ್ನ ಸೋಕಿ ಸುಖಿಸಿದೆ,
ಹಾಡು ನಿನ್ನ ರಾಗವೆಂದು - ಅಪ್ಪಿ ಅಲಾಪಿಸಿದೆ....

ನನ್ನ ಬೆರಳು ಕಳ್ಳನಾಗಿ - ಕದ್ದು ನಿನ್ನ ಸ್ಪರ್ಶಿಸಿದೆ,
ಕಣ್ಣು ನನದು ನಿನ್ನ ಕನಸ - ಬೆಂಬಿಡದೆ ಕಂಡಿದೆ,
ನೆನಪು ನಿನದು ಮರಳಿ ಮತ್ತೆ - ಮನಸ ಮುಗುಳು ನಗಿಸಿದೆ,
ಮನಸು ನಗುವ ಖುಷಿಯಲೂ - ನೀ ಜೋತೆಯಲಿರದ ನೋವಿದೆ....
************************************************************************
ಹೊಸ ವಸಂತಕೆ ಹಳೆ ಗೆಳೆಯನಾ ಶುಭಾಶಯವು,
ಒಲವ ತುಂಬಿ ಕಳಿಸಿರುವೆ ಶುಭಾಶಯದ ಸಂದೇಶವನು....

ಒಮ್ಮೆ ನೀ ನಕ್ಕಾಗ ಹೃದಯ ಸೋತು ನಿಂತಿತ್ತೆ,

ಆ ನಿನ್ನ ಕಾಲ್ಗೆಜ್ಜೆ ಮುಟ್ಟಿ ಮುತ್ತು ನೀಡಲೆನಿಸಿದೆ,
ಮಾತಾಡಲೇ ಪ್ರೀತಿ ಮಳೆಯ ಪ್ರತಿ ಹನಿಯೊಂದಿಗೆ?
ಹೂವಲ್ಲಿ ಮೃದು ಕೆನ್ನೆಯ ಸವರೋ ಆಸೆಯಾಗಿದೆ..

ಮನದ ಕನ್ನಡಿ ಎದುರು ನೀ ನಾಚಿದಂತಾಗಿದೆ,
ನೀ ಆಡು ಮಾತು ಮತ್ತೆಂದು ಕಿವಿಗೆ ಕೇಳುವುದೇ?
ಚಂದ್ರನನೆ ನಾಚಿಸಿದ ಮೊಗ ಕಣ್ಣೆದುರು ಕಂಡಿದೆ,
ಹೊಸ ವರ್ಷದ ಹೊಸ್ತಿಲಲಿ ನಿನದೆ ನೆನಪಾಗುತಿದೆ....

************************************************************************
ಭುವಿಯ ಸಂತೆ ಹುಡುಕಿದೆ - ನಿನಗೊಂದು ಉಡುಗೊರೆ ನೀಡಲು,
ಕೊಡಲಾರ ಈ ಬಡವ ಹೆಚ್ಚೇನು - ನನ್ನ ಪ್ರೀತಿಗಿಂತಲೂ....

ತಾವರೆ ಎಸಳುಗಳ ತಂದೆ ನಾ - ಕೆನ್ನೆಗೆ ಕೆಂಪೆರೆಯಲು,

ಮುದ್ದು ಕೆನ್ನೆ ಕೆಂಪನ್ನೇ - ಆ ತಾವರೆ ಕದ್ದಿದೆಯಂತೆ,
ಶ್ರೀಗಂಧ ತೆಯ್ದಿರುವೆ - ಆ ನುಣುಪು ಕೈಗೆ ಲೇಪಿಸಲು,
ನಿನ್ನ ಸೋಕಿದಾಗಲೇ - ಗಂಧದಾ ಪರಿಮಳ ಹೆಚ್ಚಿದೆ....

ಹೊಂಬಿಸಿಲ ತೇರನೇರಿ ಬಂದನು - ಆ ರವಿ ನಿನ್ನ ಕಾಣಲು,
ನಿನ್ನ ಕಂಡ ಕ್ಷಣದಲೇ - ತಾ ತಂಪೆರೆಯೋ ಚಂದ್ರನಾದನೆ,
ನಿನ್ನ ತುಟಿಯ ನಗುವದು - ಕಂಡಿದೆ ಪ್ರತಿ ಸಿಹಿಗನಸಲು,
ಕನಸಿಂದ ಹೊರ ಬಾರೆ - ಜೀವವಿರದೀ ಕಾವ್ಯಕೆ - ನೀ, ಇಲ್ಲದೇನೆ....  
************************************************************************

ಏಕೆ ನಿನ್ನ ಕಂಡೆನೋ - ತಿಳಿವ ಮುನ್ನ ಪ್ರೀತಿಸಿದೆ,
ನನ್ನೇ ನಾನೇ ಕೊಂದರೂ - ಹುಟ್ಟಿದೀ ಪ್ರೀತಿ ಸಾಯದೆ....

ಕಣ್ಣ ರೆಪ್ಪೆ ತೆರೆದರೂ - ನಿನ್ನ ಕನಸೆ ಕಂಡಿದೆ,
ಕಣ್ಣು ಮುಚ್ಚೋ ಮೊದಲೇನೆ - ನಿನ್ನ ಕಾಣಬೇಕಿದೆ,
ಸ್ಪೂರ್ತಿಯಾಗಿ ಸೆಳೆದ ನೀನು - ಏಕೆ ಎದಿರುಬಾರದೆ?
ಕಾಯಿಸಿರುವೆ ನನ್ನನು - ಹಸಿವು, ತುತ್ತಿಗೆ ಕಾಯುವಂತೆ....

ನೀ ಬರುವ ಹೊಸ್ತಿಲಿಗೆ - ಹೃದಯ ರಂಗೋಲಿ ಅರಳಿದೆ,
ಒಲವೆ ಹಸಿರು ತೋರಣ - ಒಲಿದು ಬಾ ಲಕುಮಿಯಂತೆ,
ದೀಪ ಹಚ್ಚಿ ಬೆಳಗಿಸು - ಅಳಿಸು ಅಂಧಕಾರ ಮನದಲೆ,
ಪ್ರೀತಿ ನೀಡಿ ಪೋಷಿಸು - ಈ ಹೃದಯ ಮೀಸಲು ನಿನಗಾಗಿಯೇ....
************************************************************************

ದುಂಬಿಯಾದೆ ನಾ - ನಿನ್ನ ಹೆಸರೇ ಹೂವಾದಾಗ,
ಹಾಡುತಾ ನಿನ್ನ ಸುತ್ತ ಹೆಸರನೆ ಹಾಡಾಗಿಸುತ....

ಮನಸಲ್ಲೇ ಮುಚ್ಚಿಟ್ಟ - ಮಾತೊಂದ ಹೇಳಲೇ?
ಕನಸಲ್ಲಿ ಬಂದು ನಾ - ಮುತ್ತೊಂದ ನೀಡಲೇ?
ಹಿಡಿದಿಟ್ಟ ಮಳೆಹನಿ - ಉಡುಗೊರೆಯು ನಿನಗೆ,
ಕದ್ದಿಟ್ಟ ಚಂದ್ರನ - ಹೊಳಪನ್ನೂ ನೀಡುವೆ....

ಬರೆಯುವ ಬೆರಳಿಗೆ ನಿನ್ನ ಸ್ಪರ್ಶ ಬೇಕಿದೆ,
ನೋಡುವ ಕಣ್ಣದು ನೀ ಬರುವುದ ಕಾದಿದೆ,
ಕಾವ್ಯದಲಿ ಸ್ಪೂರ್ತಿಯಾಗಿ ನೀ ಮೂಡಿ ಬಂದಂತೆ,
ಹೂ ನಗೆಯ ಚೆಲ್ಲುತ - ಒಮ್ಮೆ ಬರಬಾರದೇ....??

 ************************************************************************


ಉಸಿರಾಡೋ ಈ ಉಸಿರಲು ನಿನ್ನ ಉಸಿರೆ ತುಂಬಲಿ,
ಉಸಿರಿಗೊಂದು ಹೆಸರು ಇಡಲೆ ಕೂಗಲೊಂದೆ ಉಸಿರಲಿ..??

ಕಣ್ಣಿಗುಸಿರು ನಿನ್ನ ನೋಟ ಕಾಯುತಿದೆ ಕಾಣಲು,
ಹೃದಯದುಸಿರು ನಿನ್ನ ಪ್ರೀತಿ ಮಿಡಿಯುತಿದೆ ಗಳಿಸಲು,
ಕೆನ್ನೆ ಗುಳಿಗೆ ಉಸಿರು ಮೆಲ್ಲ ಸೋಕುವಂತೆ ಊದಲೇ?
ನಿನ್ನ ಧ್ಯಾನದಲ್ಲಿ ಉಸಿರಾಡುವುದನೆ ಮರೆತೆನೆ..

ಉಸಿರಿಗೊಂದು ಉಸಿರು ಉಂಟು ನಿನ್ನದೇನೆ ಉಸಿರದು,
ದೇಹ ಎರಡು ಉಸಿರು ಒಂದೇ - ನಿನ್ನ ಉಸಿರೆ ನನ್ನದು,
ಪ್ರೀತಿ ಚಿಗುರಲೆಂದು ನನ್ನ ಉಸಿರನ್ನೂ ನೀಡುವೆ,
ನಿನ್ನ ಹೃದಯದಿ ನಾನಿದ್ದು ಬೆಚ್ಚಗೆ ಉಸಿರಾಡಲೇ....??
************************************************************************

ಯಾರ ಚೆಲುವ ಹೊತ್ತು ಹುಟ್ಟಿದೆ ನೀ ಭುವಿಯಲಿ,
ಯಾವ ಘಳಿಗೆಯಲಿ ಕಾಲಿಟ್ಟೆ ಹೃದಯದ ಅರಮನೆಯಲಿ....

ಸೂರ್ಯ ನುಗ್ಗಿ ಬಂದ ಬೆಟ್ಟಗಳ ಸಾಲಿಂದ,
ನಿನ್ನ ಬೆಳಕ ಕದ್ದು - ಈ ಲೋಕಕೆ ನೀಡಲು,
ಆ ರವಿ ಮುಳುಗಲೆಂದೆ ಈ ಚಂದ್ರ ಕಾದಿದ್ದ,
ಸೋಕಿ ನಿನ್ನ ಮೆಲ್ಲ - ಇನ್ನು ತಂಪಾಗಲು..

ನಿನ್ನನ್ನು ಸೃಷ್ಟಿಸಿ - ದೇವ ತಾ ಚಿಂತಿಸಿದ,
'
ಯಾರು ಕಾಯುವರೋ ಈ ಸೋಜಿಗವ',
ಒಮ್ಮೆಲೇ ನನ್ನ ಕಂಗಳಿಗೆ ನಿನ್ನ ಕಾಣಿಸಿದ,
ಬಂಧಿಸಿ ನಿನ್ನ ಪ್ರೀತಿಯಲಿ - ಆಗಿ ನಿನ್ನ ರಕ್ಷಕ....

************************************************************************
ಯಾವ ನನ್ನ ತಪ್ಪಿಗಾಗಿ ಈ ಮೌನ ನಿನ್ನಲಿ,
ಸಂತೆಯಲ್ಲು ಚಿಂತೆಯಿದೆ ಈ ಪುಟ್ಟ ಮನದಲಿ....

ಮನಸಿನಲ್ಲಿ ಪ್ರೀತಿ ಇದೆ ಇನ್ನೂ ಕಸಿಯಾಗದೆ ,
ಮೊಳಕೆಯೊಡೆದು ಜೀವಜಲಕೆ ನಿನ್ನತ್ತ ನೋಡಿದೆ ,
ನಿನ್ನ ನಗುವೇ ಸೂರ್ಯನಾಗಿ ಬೆಳಕ ತಾ ಚೆಲ್ಲಲಿ ,
ಕಾಣಲದನು ನಿನ್ನಲಿ - ಈ ಜೀವ ಕಾಯಲಿ....

ಓಡು ದೂರ ಮಗುವಿನಂತೆ ನಾ ನಿನ್ನ ಹಿಡಿಯುವೆ ,
ಮೆಲ್ಲ ನಿನ್ನ ನುಣುಪು ಕೈಯ್ಯ ಸವರಿ ಮುತ್ತು ನೀಡಲೇ ?
ಹಾಡು ಇದುವೇ ಶುರುವು ಇನ್ನು ಇಷ್ಟು ಬೇಗ ಮುಗಿಯದು ,
ಆಸೆ ಇದೆ ತಬ್ಬಿ ನಿನ್ನ ಚಂದ್ರನನ್ನು ತೋರಲು....
 
************************************************************************

ನಿನ್ನ ಕಂಡ ಸೂರ್ಯ ನಾಚಿ ಕೆಂಪಾದ,
ಚಂದ್ರನವ ನಿನ್ನ ನೆನಪಲೆ ಇನ್ನು ತಂಪಾದ....

ಲತೆಯಂತ ಮುಂಗುರುಳು ಹೂಗೆನ್ನೆ ಮುದ್ದಾಡಿರೆ,
ನಾಚುತಲಿ ತುಟಿಗಳದು ಪ್ರತಿ ಮುತ್ತಿಗೂ ನಗುತಿದೆ,
ನೂರು ಕಣ್ಣುಗಳು ನಿನ್ನನೆ ನೋಡುತಿರೆ - ನಿನ್ನ ಕಣ್ಣು ಮಾತ್ರ ನನ್ನನೆ ಹುಡುಕುತಿದೆ....

ಕೈ ಬಳೆಯು ನಾ ಮುಟ್ಟಲೆಂದೇ ಘಲ್ಲೆಂದು ನುಡಿದಿರೆ,
ಕಾಲ್ ಗೆಜ್ಜೆ ಝಲ್ಲೆಂದು ನೀ ಹೋಗೋ ದಾರಿ ತೋರುತಿದೆ,
ನೀನುಟ್ಟ ಸೀರೆ ನಿನ್ನಿಂದ ಮೆರಗುತಿರೆ - ನೀಲಿ ಆಗಸದ ಅಂದವ ಬಿಳಿ ಮೋಡ ಹೆಚ್ಚಿಸಿದಂತಿದೆ....
************************************************************************
ಯಾರು ಮೀಸಲಿಟ್ಟ ತಿಳಿಯದು - ಪ್ರೀತಿಗೆಂದೆ ದಿನ,
ಎದೆಯ ಪ್ರೀತಿ ಪದವಾಗಿಸಿ - ನಿನಗೆ ಬರೆವೆ ಪ್ರೇಮದೀ ಕವನ....

ಕಮಲದಿಂದ ಕೆಂಪು - ತಂದು ಕೆನ್ನೆಗಳಿಗೆ ಹಚ್ಚಿದೆ,
ಮುತ್ತ ಚಿಪ್ಪು ಕಾಯುವಂತೆ - ನಿನ್ನಂದಕೆ ನಾ ರಕ್ಷಣೆ,
ಬಳ್ಳಿಯಂತ ಕೈಗಳಿಗೆ - ಹೂವ ಬಳೆಯ ತೊಡಿಸುವೆ,
ನುಣುಪು ಪಾದಗಳಿಗೆ ನನ್ನ ಎದೆ ಬಡಿತವೆ ಗೆಜ್ಜೆಯೆ..

ನನ್ನ ತೋಳು ತಬ್ಬಿ ನಿನ್ನ - ಪ್ರೇಮಖೈದಿ ಮಾಡಲು,
ಅಧರಗಳು ಕಾಯುತಿದೆ - ಕಣ್ರೆಪ್ಪೆಗೆ ಮುತ್ತಿಕ್ಕಲು,
ಹುಟ್ಟೊ ಪ್ರೀತಿ ತುಂಬ ಹಿರಿದು - ಹೃದಯ ಚಿಕ್ಕದಾದರೂ,
ಒಂದು ದಿನ ಸಾಲದೆನಗೆ - ಪ್ರೇಮ ಕವಿತೆ ಬರೆಯಲು.... 

************************************************************************
ಬೆಳ್ಳಿ ಬೆಳಕನು ಕಣ್ಣಲಿ ತುಂಬಿ - ದೀವಿಗೆಯಾಗಿಸಿ,
ಹುಡುಕುತ ಹೊರಟೆ - ಚಲುವೆ ನಿನ್ನ ಸನಿಹವ ಬಯಸಿ....

ವಿರಹದ ಬಿಸಿಲಲಿ ಬೇಯುತ ಜೀವ ದಣಿದಿದೆ ಇಂದು,
ಪ್ರೀತಿಯ ಮಳೆಯ ಹರಿಸುತ ನೀನು ನನ್ನನು ತಣಿಸು,
ಚಂದ್ರನ ತಂಪು ಬಾಡಿಗೆ ತಂದು - ಒಲವಲಿ ಬೆರೆಸು,
ಮುದ್ದಿಸಿ ಒಮ್ಮೆ - ತಾಯಿಯಂತೆ ತುತ್ತನು ಉಣಿಸು..

ಅಂಗೈ ರೇಖೆ ನಕ್ಷೆಯು ನನಗೆ - ತಲುಪಲು ನಿನ್ನ,
ಹುಡುಕಲು ನಿನ್ನ - ನನ್ನೀ ಭುವಿಯಲಿ ಬಿಟ್ಟನು ಬ್ರಹ್ಮ,
ಸುಳಿವೇ ಇಲ್ಲದ ದಾರಿಯಲಿಂದು - ಸಾಗಿದೆ ಪಯಣ,
ಮುಗಿಯದು ಗೆಳತಿ - ನೀ ಸಿಗೊವರೆಗೂ ನನ್ನೀ ಕವನ....


***********************************************************************
ಪ್ರತಿ ಕವನದಾ ಪದಕು ನಿನ್ನ ಸ್ಫೂರ್ತಿ ಬೇಕಿದೆ, 
ಹೃದಯದಾ ಪ್ರತಿ ಬಡಿತ ನಿನ್ನ ಹೆಸರ ಹೇಳಿದೆ.... 

ತಿಳಿ ನೀಲಿಗಣ್ಣಲಿ - ಸಾಗರವೇ ಮುಳುಗಿದೆ, 
ಮುಂಗುರುಳ ಸುರುಳಿಗೆ - ಬೆರೆಳ ಪೋಣಿಸಲೇ, 
ಕಮಲಕೆ ನಿನ್ನ ಕೆನ್ನೆ ಬಣ್ಣ ಸವರಿಸಲೇ, 
ಚಂದ್ರನಿಗೆ ನಿನ್ನ ತೋರುತಾ ನಾ ಉಣಿಸಲೇ.. 

ನಿನ್ನಾ ಹೊಳಪನ್ನು ತಾರೆಗಳಿಗೆ ಕೊಟ್ಟೆಯ? 
ತುಟಿಯಲಿ ಮುತ್ತೊಂದ ಬೆಚ್ಚಗೆ ಬಚ್ಚಿಟ್ಟೆಯ? 
ನಿನ್ನೇಕೆ ಹೊಗಳುವೆನೋ ನಾನಂತೂ ತಿಳಿಯೆ, 
ಬರಿ ಬರೆವುದು ಮಾತ್ರ ಹೃದಯದ ಕಸುಬಾಗಿದೆ....

************************************************************************
 
ಸಂತೆಯಲಿ ನಾ ಮೊದಲು ನಿನ್ನ ಮುಖವ ನೋಡಿದೆ,
ನೋಟದಲೆ ಈ ಮನದಿ ಪ್ರೀತಿ ಘಂಟೆಯಾ ನೀ ನುಡಿಸಿದೆ...

ಖುಷಿಯಲಿ ನಿನ್ನ ಮಾತು - ಮುದ್ದು ಗಿಣಿಯಂತೆ ಕೇಳಿದೆ,
ಬೇಸರದಿ ನೀ ನುಡಿಯೇ - ಕಗ್ಗತ್ತಲಲಿ ನಾ ಕಳೆದು ಹೋದೆ,
ಆ ಮುಗುಳ್ನಗೆ ಚಂದ ನಿನಗೆ, ನಾ ನಗುವೇ ಅದರಿಂದಲೇ,
ಉಸಿರು ದೇಹಕೆಂಬಂತೆ - ನಿನ್ನ ನಗುವಲೆ ನನ್ನ ಜೀವವಿದೆ..

ಹೂ ಗಲ್ಲಕ್ಕೆ ಮುತ್ತೊಂದು - ಕೊಡಲೆ ನಾ ದುಂಬಿಯಾಗಿ?
ಪ್ರೀತಿ ಮಳೆ ಹರಿಸಿದೆ - ನೀ ಮಳೆ ಸುರಿಸೋ ಮೇಘವಾಗಿ,
ಮಲಗಿರುವೆ ಮುದ್ದು ಮಗುವಂತೆ - ನೀ ಎನ್ನ ಹೃದಯದಿ,
ಕಣ್ಣ ರಕ್ಷಿಸೋ ರೆಪ್ಪೆ - ನಾ ಮುದ್ದಿಸುತಿರೋ ಭಾಗ್ಯವಿರಲಿ....

************************************************************************
ಕಂಡ ಕ್ಷಣದಲ್ಲೇ ಕಣ್ಣು ನಿನ್ನ ಚಿತ್ರ ಸೆರೆ ಹಿಡಿಯಿತು,
ನಿನ್ನ ಹೆಜ್ಜೆ ಗುರುತನ್ನೇ - ಬ್ರಹ್ಮ ನನ್ನ ಹಣೆ ಬರಹವಾಗಿಸಿದನೋ....

ತಾವರೆ ಕಾಯುತಿದೆ ನೋಡಲು ನಿನ್ನ ಮಂದಹಾಸ,
ಬೀಗುತಿದೆ ಕದ್ದು ನಿನ್ನ ಬಿಗುಮಾನವ - ಮುದ್ದು ಹಂಸ,
ಸ್ಪರ್ಶಿಸಲು ನೀ - ಆ ಮೇಘ ಕರಗಿ ಮಳೆ ಆಯಿತಾ?
ನೆನೆದು ಆ ಮಳೆಗೆ ನನ್ನಲಿ -  ಪ್ರೀತಿ ಮೊಳಕೆ ಚಿಗುರಿತ?

ಪುಟ್ಟ ಹೃದಯದಿ ನಮ್ಮದೇ ಮನೆ ಕಟ್ಟಿರುವೆ ನಾ,
ನಿನ್ನ ಸಿಂಗರಿಸುವೆ ಅಲ್ಲಿ - ಹೆಚ್ಚಿಸಲು ಆ ಚಂದವ,
 ದೃಷ್ಟಿ ಬೊಟ್ಟಿಟ್ಟು ಮುದ್ದಿಸುವೆ - ಆ ಕೆಂಪು ಗಲ್ಲಕೆ,
ಹೃದಯವ ಬೆಚ್ಚಗಾಗಿಸು ಇನ್ನಷ್ಟು - ಮುತ್ತಿಟ್ಟು ಮೆಲ್ಲಗೆ.... 

************************************************************************